ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ, ರಾಂಪುರ, ಮಲ್ಲಾಪುರ ಹಾಗೂ ಕನಕಗಿರಿ ತಾಲೂಕಿನ ನವಲಿ, ಕ್ಯಾರಿಹಾಳ, ಮಲ್ಲಾಪುರ್, ಕಾರಟಗಿ ತಾಲೂಕಿನ ನಂದಿಹಾಳ, ಮುಸ್ಟೂರು, ಉಳೇನೂರು, ಬೆನ್ನೂರು ಮುಂತಾದೆಡೆಯಿಂದ ಸರ್ಕಾರಕ್ಕೆ ಯಾವುದೇ ರಾಜಧನ ಪಾವತಿಸದೇ, ಅಕ್ರಮ ಮರಳು ದಂಧೆಕೋರರು ಮರಳನ್ನು ಶೇಖರಿಸಿ ಮರಳು ಘಟಕ ನಿರ್ಮಿಸಿಕೊಂಡಿರುತ್ತಾರೆ. ಇದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿಗಳ ನಷ್ಟವುಂಟಾಗಿದೆ ಎಂದು ಕರವೇ ಕೊಪ್ಪಳ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ಪ್ರಕಟಣೆಯಲ್ಲಿ ಕಿಡಿಕಾರಿದ್ದಾರೆ.
ಈ ಅಕ್ರಮ ಮರಳು ದಂಧೆಕೋರರು ಗಣಿಮತ್ತು ಭೂ ವಿಜ್ಞಾನ ಇಲಾಖೆಯಿಂದ ಹಾಗೂ ಸಂಬAಧಿಸಿದ ಇಲಾಖೆಯ ಅಧಿಕಾರಿಗಳಿಂದ ಉಸುಕು ಮಾರಾಟಕ್ಕೆ ಸಂಬಂಧಿಸಿದಂತೆ ಅನುಮತಿ ಪಡೆದುಕೊಂಡಿದ್ದು ನಿಜ, ಆದರೆ ಇವರು ಇಲಾಖೆಯ ಗಮನಕ್ಕೆ ತರದೇ, ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಿ ಸಂಗ್ರಹಿಸಿ ಅದನ್ನು ಫಿಲ್ಟರ್‌ಗೊಳಿಸುವುದರ ಮೂಲಕ ಗ್ರಾಹಕರಿಗೆ ಮಾರಾಟ ಮಾಡಲು ಮುಂದಾಗಿರುವುದು ಎಷ್ಟು ಸೂಕ್ತ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ, ಅಲ್ಲಿ ಇಲ್ಲಿ ಸಾಲ ಮಾಡಿ ಮನೆಯಲ್ಲಿದ್ದ ಸಣ್ಣ ಪುಟ್ಟ ಬಂಗಾರ ಮಾರಾಟ ಮಾಡಿ ಮನೆ ಕಟ್ಟಿಸಿಕೊಳ್ಳುವ ಬಯಕೆಯನ್ನು ಹೊಂದಿರುವ ಅನೇಕ ಗ್ರಾಹಕರಿಗೆ ಇಂತಹ ಮರಳು ಸಂಸ್ಕರಿಸಿದ ಉಸುಕನ್ನು ಪಡೆದು ಮನೆಯನ್ನು ನಿರ್ಮಿಸಿಕೊಂಡಿದ್ದೆ ಆದರೆ ಕೆಲವೇ ವರ್ಷಗಳಲ್ಲಿ ಮನೆ ಕುಸಿತಗೊಳ್ಳುವುದರಲ್ಲಿ ಯಾವುದೇ ಸಂದೇಹ ಇಲ್ಲ. ಇಂತಹ ಸಂದರ್ಭದಲ್ಲಿ ಮನೆ ಕಟ್ಟುವ ಗ್ರಾಹಕರು ಉಸುಕಿನ ಮೌಲ್ಯ, ಗುಣಮಟ್ಟ ಇವುಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯವಶ್ಯಕವಾಗಿದೆ. ಈ ಕುರಿತು ಸಂಬಂಧಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದಾಗ ತಾವು ಘಟಕಕ್ಕೆ ಹೋಗಿ ಪರಿಶೀಲನೆ ಮಾಡಿ ಅದು ಕಪ್ಪು ಮಿಶ್ರಿತ ಉಸುಕು ಆಗಿರುವುದರಿಂದ ನೀರಿನಿಂದ ಸಂಸ್ಕರಣಗೊಳಿಸಲಾಗುತ್ತದೆ ಎಂದು ಹೇಳುವುದರ ಮೂಲಕ ಮರಳು ಮಾಫಿಯಾಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ, ಇಲಾಖೆಯ ನೀತಿ ನಿಯಮಗಳ ಪ್ರಕಾರ ನಿಸರ್ಗದಲ್ಲಿ ದೊರೆಯುವ ಉಸುಕನ್ನು ಮಾರಾಟ ಮಾಡುವ ಪರವಾನಿಗೆಯನ್ನು ಇಲಾಖೆ ನೀಡುತ್ತದೆ. ಆದರೆ ಇಂಥ ಮರಳುಗಳನ್ನು ಸಂಸ್ಕರಿಸಿ ಮಾರಾಟ ಮಾಡಲು ಯಾವುದೇ ಅವಕಾಶವಿಲ್ಲ. ಇಂತಹ ಸಂದರ್ಭದಲ್ಲಿ ಬೇಲಿಯೇ ಎದ್ದು ಹೊಲ ಮೇಯುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿರುವುದು ಜನತೆಯ ದುರದೃಷ್ಟ ಹಾಗೂ ನಮ್ಮ ದುರಾಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಅಕ್ರಮ ಮರಳು ದಂಧೆಕೋರರು ಹಾಡುಹಗಲೇ ಹಾಗೂ ರಾತ್ರಿವಿಡೀ ಮರಳು ಸಂಗ್ರಹಣೆಯಲ್ಲಿ ತೊಡಗಿ ಅಕ್ರಮ ಮರಳನ್ನು ಶೇಖರಿಸುವ ಕಾರ್ಯದಲ್ಲಿ ತೊಡಗಿದ್ದರೂ, ಗಣಿ ಇಲಾಖೆ ಹಾಗೂ ಸಂಬಂದಪಟ್ಟ ಇಲಾಖೆಯ ಅಧಿಕಾರಿಗಳು ಕಣ್ಣ ಮುಚ್ಚಿ ಕುಳಿತಿದ್ದಾರೆ. ಒಂದೇ ಟೋಕನ್ ಪಡೆದು ೮-೧೦ ಲಾರಿಗಳ ಮರಳು ಸಾಗಾಣಿಕೆ ಮಾಡಲಾಗುತ್ತಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಮರಳು ಲೂಟಿಯಾಗುತ್ತಿದ್ದರೂ ಗಮನ ಹರಿಸದಿರುವುದು ಅನುಮಾನಕ್ಕೆ ಕಾರಣವಾಗಿದೆ. ಅಕ್ರಮ ಮತ್ತು ಅವೈಜ್ಞಾನಿಕ ಮರಳು ಗಣಿಗಾರಿಕೆಯಿಂದಾಗಿ ಪರಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಅಲ್ಲದೇ ಮರಳು ದೊರಕದ ಸಂದರ್ಭಗಳಲ್ಲಿ ಭೂಮಿಯನ್ನು ಅಗೆದು, ಮಣ್ಣು ಮಿಶ್ರಿತ ಮರಳನ್ನು ಲೂಟಿ ಮಾಡಲಾಗುತ್ತಿದೆ. ಇದು ಕೃಷಿಯ ಮೇಲೂ ಪರಿಣಾಮ ಬೀರುತ್ತದೆ ಎಂದು ರೈತರ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಗಂಗಾವತಿ ತಾಲೂಕಿನ ದೇವಘಾಟ್‌ನ ಹತ್ತಿರ ನಿರ್ಮಾಣವಾಗುತ್ತಿರುವ ಸೇತುವೆ ಕಾಮಗಾರಿಗೂ ಈ ಅಕ್ರಮ ಮಣ್ಣು ಮಿಶ್ರಿತ ಮರಳನ್ನು ಉಪಯೋಗಿಸಲಾಗುತ್ತಿದ್ದು, ಇದರಿಂದ ಕಾಮಗಾರಿಯು ಗುಣಮಟ್ಟ ಕಳೆದುಕೊಳ್ಳಲಿದೆ. ಅಲ್ಲದೇ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿಗಳ ನಷ್ಟವುಂಟಾಗಲಿದೆ. ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ಕನಕಗಿರಿಯ ತಹಶೀಲ್ದಾರರು, ಗಂಗಾವತಿ ತಹಶೀಲ್ದಾರರು ಮರಳು ಘಟಕಕ್ಕೆ ಭೇಟಿ ನೀಡಿ ಅಲ್ಲಿನ ಉಸುಕಿನ ಗುಣಮಟ್ಟ ಅಥವಾ ಮರುಳು ಮಿಶ್ರಿತ ಉಸುಕು ಪತ್ತೆ ಹಚ್ಚಿ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ತೆಗೆದುಕೊಳ್ಳುವುದರ ಮೂಲಕ ಮನೆಯನ್ನು ನಿರ್ಮಿಸುವ ಉದ್ದೇಶ ಹೊಂದಿದ ಅನೇಕ ಗ್ರಾಹಕರಿಗೆ ಮುಂದಾಗುವ ಅನಾಹುತವನ್ನು ತಪ್ಪಿಸಬೇಕೆಂದು ಕರವೇ ಕೊಪ್ಪಳ ಜಿಲ್ಲಾಧ್ಯಕ್ಷರಾದ ಪಂಪಣ್ಣ ನಾಯಕ ಪ್ರಕಟಣೆಯಲ್ಲಿ ಒತ್ತಾಯಿಸಿ, ಇದೇ ರೀತಿ ಅಕ್ರಮ ಮರಳು ಮಾಫಿಯಾ ಮುಂದುವರೆದರೆ, ಕರವೇ ಮುಂದಿನ ದಿನಗಳಲ್ಲಿ ಸಂಬಂದಪಟ್ಟ ಇಲಾಖೆಯ ಕಛೇರಿಗಳ ಮುಂದೆ ಉಗ್ರ ಹೋರಾಟ ರೂಪಿಸಲಿದೆ ಎಂದು ಎಚ್ಚರಿಸಿದ್ದಾರೆ.
ವರದಿ : ಶರಣಪ್ಪ ಗಂಗಾವತಿ