ಗಂಗಾವತಿ : ಅಗ್ನಿವೀರರಿಗೆ ಚಾಲಕ,ಎಲೆಕ್ಟ್ರಿಷಿಯನ್,ದೋಬಿ,ಕ್ಷೌರಿಕ ಮತ್ತಿತರ ವೃತ್ತಿಗಳಲ್ಲಿ ತರಬೇತಿ ನೀಡಲಾಗುವದೆಂದು ಕೇಂದ್ರಸಚಿವ ಜಿ ಕಿಶನ್ ರಡ್ಡಿ ಹಾಗೂ ಅಲ್ಪಾವಧಿ ಸೇವೆ ಮುಗಿಸಿದ ಯೋಧರಿಗೆ ಬಿಜೆಪಿ ಕಛೇರಿಗಳಲ್ಲಿ ಭದ್ರತಾ ಸಿಬ್ಬಂದಿ ಕೆಲಸ ನೀಡಲಾಗುವದೆಂದು ಬಿಜೆಪಿ ಮುಖಂಡ ವಿಜಯವರ್ಗಿ ಹೇಳಿಕೆಗೆ ಆಮ್ ಆದ್ಮಿ ಪಾರ್ಟಿಯ ಗಂಗಾವತಿ ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಗ್ನಿಪಥದ ಸಾಧಕ_ಭಾದಕಗಳ ಕುರಿತಾಗಲಿ,ಅಗ್ನಿಪಥ ಪಾಸ್ ಅಥವಾ ವಾಪಸ್ ಪಡೆಯುವುದಾಗಲಿ ಸರಕಾರದ ವಿವೇಚನೆಗೆ ಬಿಟ್ಟ ವಿಷಯ. ಆದರೆ ಯುವಕರು ದೇಶ ಸೇವೆ ಸಲ್ಲಿಸಲು ಸೇನೆ ಸೇರುತ್ತಾರೆಯೇ ಹೊರತು ಬಿಜೆಪಿ ಕಛೇರಿ ಕಾಯಲು ಅಲ್ಲ. ದೇಶದ ಯುವಕರು ಹಾಗೂ ಸೈನಿಕರನ್ನು ಅವಮಾನಗೊಳಿಸುವ ನೀಚತನದ ಹೇಳಿಕೆ ನೀಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪತ್ರಿಕಾ ಹೇಳಿಕೆಯ ಮೂಲಕ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ. ಸುಮ್ಮನಿದ್ದರೆ ಪರೋಕ್ಷವಾಗಿ ಕೇಂದ್ರದ ಬೆಂಬಲವಿದೆ ಎಂದರ್ಥ. ಮುಂದಿನ ನಾಲ್ಕು ವರ್ಷಗಳ ನಂತರ ಬಿಜೆಪಿ,ಸಂಘಪರಿವಾರ , ಮತ್ತಿತರ ಸಂಘ ಸಂಸ್ಥೆಗಳಲ್ಲಿ ಕಾಯುವ ಕೆಲಸಕ್ಕೆ ನೇಮಕ ಮಾಡಿಕೊಳ್ಳಬಹುದೆಂದು ಕಳವಳ ವ್ಯಕ್ತಪಡಿಸಿದ್ದಾರೆ. ಬಡವರ,ಶ್ರಮಿಕರ,ದಲಿತ, ಹಿಂದುಳಿದ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಸೈನ್ಯ ಸೇರುತ್ತಿರುವದರಿಂದ ಇಂತಹ ಕಾನೂನು ಜಾರಿಗೆ ತರುತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ದೇಶದ ಆರ್ಥಿಕ ಪರಿಸ್ಥಿತಿಯನ್ನು ನೆಪ ಮಾಡಿಕೊಂಡು ಪಿಂಚಣಿ ಮತ್ತು ಇತರೆ ಸೌಲಭ್ಯಗಳ ಕಡಿತ ಮಾಡಿ ಈ ರೀತಿ ನೇಮಕ ಮಾಡುವ ಬದಲಾಗಿ ದೇಶ ಭಕ್ತರೆಂದು ಹೇಳಿಕೊಳ್ಳುವ ಬಿಜೆಪಿ ಮತ್ತು ಸಂಘ ಪರಿವಾರದವರು ಸೈನ್ಯ ಸೇರುವ ಮೂಲಕ ಉಚಿತ ದೇಶ ಸೇವೆ ಮಾಡಿ ನಿಮ್ಮ ನಿಜವಾದ ದೇಶ ಭಕ್ತಿ ತೋರಿಸಲಿ ನಾನು ನಿಮ್ಮ ಸಂಗಡ ಬರುತ್ತೇನೆಂದು ಸವಾಲು ಹಾಕಿದ್ದಾರೆ.ಶಾಸಕರ ಮತ್ತು ಸಂಸದರ ಪಿಂಚಣಿ ಯೋಜನೆಯನ್ನು ರದ್ದುಪಡಿಸುವಂತೆ ಇದೇ ಸಂಧರ್ಭದಲ್ಲಿ ಕೇಂದ್ರ ಸರಕಾರವನ್ನು ಮ್ಯಾಗಳಮನಿ ಆಗ್ರಹಿಸಿದ್ದಾರೆ.
ವರದಿ : ಶರಣಪ್ಪ ಗಂಗಾವತಿ