ಕೊಟ್ಟೂರು : ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಕೆ, ಅಯ್ಯನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಚಪ್ಪರದಹಳ್ಳಿ ಗ್ರಾಮದ ಬಹುತೇಕ ಕಡೆಗಳಲ್ಲಿ ಚರಂಡಿ ನಿರ್ಮಾಣವಾಗಿಲ್ಲ ಪರಿಣಾಮ ತ್ಯಾಜ್ಯನೀರು ರಸ್ತೆಯಲ್ಲಿಯೇ ನಿಂತು ಗುಂಡಿಗಳಾಗಿವೆ. ನೀರಿನೊಂದಿಗೆ ಕಸ ಕೊಳೆತು ನಾರುತ್ತಿದ್ದು, ಸೊಳ್ಳೆಗಳ ಆವಾಸ ತಾಣಗಳಾಗಿವೆ ಮತ್ತು ಸಾಂಕ್ರಾಮಿಕ ರೋಗಗಳನ್ನು ಹರಡುತ್ತಿವೆ. ಇದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಸಹ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ ಮನೋಭಾವ ತೋರಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮದಲ್ಲಿ ನೈರ್ಮಲ್ಯತೆ ಕಾಣೆಯಾಗಿದ್ದು ಸ್ವಚ್ಚತೆ ಕಾಪಾಡಬೇಕಾದವರು ತಮ್ಮ ಕರ್ತವ್ಯ ಮರೆತಿದ್ದಾರೆ, ಜನಪ್ರತಿನಿಧಿಗಳು ಜವಾಬ್ದಾರಿ ಅರಿಯದೇ ಗ್ರಾಮಸ್ಥರ ಕುರಿತು ಕಾಳಜಿ ತೋರುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರ ಬಗ್ಗೆ ಸ್ಥಳೀಯ ಪತ್ರಿಕೆಯಲ್ಲಿ ಸುದ್ದಿಯಾಗಿದ್ದನ್ನು ಗಮನಿಸಿದ ಶಾಸಕರು ಕೂಡ ಇದರ ಬಗ್ಗೆ ನಿರ್ಲಕ್ಷ ವಹಿಸಿರುವುದು ಜನರ ಆಕ್ರೋಷಕ್ಕೆ ಕಾರಣವಾಗಿದೆ. ಶಾಸಕರ ಅನುದಾನದ ಅಡಿಯಲ್ಲಿ ಕಾಮಗಾರಿ ನಡೆದಿರುವ ಚಪ್ಪರದಹಳ್ಳಿ ಆಶ್ರಯ ಕಾಲೋನಿಯ ಸಿಸಿ ರಸ್ತೆಯು ಕಾಮಗಾರಿ ಮುಗಿದು ಆರು ತಿಂಗಳು ಕಳೆದಿಲ್ಲ ಆಗಲೇ ಬಿರುಕು ಬಿಟ್ಟಿದೆ ಹಳ್ಳಿಯ ಗ್ರಾಮಸ್ಥರು ಕಳಪೆ ಕಾಮಗಾರಿಯ ಬಗ್ಗೆ ದೂರಿದ್ದರಿಂದ ಕೂಡಲೇ ಹಾಳಾದ ಸಿ.ಸಿ.ರಸ್ತೆಗೆ ತೇಪೆ ಹಚ್ಚಿ ಮತ್ತೆ ಸರಿಪಡಿಸುವುದಾಗಿ ನುಣುಚಿಕೊಂಡಿದ್ದಾರೆ. ಚರಂಡಿಯನ್ನು 30 ಮೀ. ವಿಸ್ತರಿಸಿ ಕಾಮಗಾರಿ ಬದಲಾವಣೆ ಮಾಡಿ ಚರಂಡಿಯನ್ನು ಸ್ವಚ್ಛ ಮಾಡಿಸುತ್ತೇವೆಂದು ಪಿ.ಡಿ.ಓ. ತಿಳಿಸಿದ್ದರೂ ಇದುವರೆಗೂ ಸಹ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಈ ರೀತಿಯ ನಿರ್ಲಕ್ಷ ಧೋರಣೆಯ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಲಾಗುವುದೆಂದು ಪತ್ರಿಕೆಗೆ ತಿಳಿಸಿದರು. ಈ ರೀತಿಯ ನಿರ್ಲಕ್ಷೆ ಮತ್ತು ಬೇಜವಾಬ್ದಾರಿತನದಿಂದ ವರ್ತಿಸುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಗ್ರಾಮದಲ್ಲಿ 200 ಮೀ. ಚರಂಡಿ ನಿರ್ಮಾಣ ಕಾಮಗಾರಿ ಮಂಜೂರಾಗಿದ್ದು, ಬರೀ 100-120 ಮೀ. ಚರಂಡಿ ಅಷ್ಟೇ ನಿರ್ಮಾಣವಾಗಿದೆ. ಗ್ರಾಮದ ಗಲ್ಲಿ ಗಲ್ಲಿಗಳಲ್ಲಿ ನೀರಿನ ಗುಂಡಿಗಳು ನಿರ್ಮಾಣವಾಗಿವೆ ಅಲ್ಲಲ್ಲಿ ಕಸ ಕೊಳೆತು ಗಬ್ಬೆದ್ದು ನಾರುತ್ತಿದ್ದು ಮೂಗುಮುಚ್ಚಿಕೊಂಡು ಜೀವನ ನಡೆಸುವಂತಾಗಿದೆ
ಹೇಸರೇಳಲಿಚ್ಛಿಸದ ವ್ಯಕ್ತಿ!
ವರದಿ: ಶಿವರಾಜ್ ಗಡ್ಡಿ