84 total views
ಕೊಟ್ಟೂರು: ಬೆಳ್ಳಿ ಪರದೆ ಬರುವ ಮುನ್ನ ಜನರಿಗೆ ಮನೋರಂಚನೆ ನೀಡುತ್ತಿದ್ದುದೇ ಈ ನಾಟಕಗಳೇ. ಹಳ್ಳಿಗಳಲ್ಲಿ ಜಾತ್ರೆ-ಉತ್ಸವಗಳಲ್ಲಿ ಕಲಾಸಕ್ತರು ನಾಟಕಗಳನ್ನು ಕಲಿತು ಆಡುತ್ತಿದ್ದರು. ದುಡುಮೆಯಿಂದ ದಣಿದ ಮನಸ್ಸುಗಳಿಗೆ ಮುದ ನೀಡುವುದು ಒಂದೆಡೆಯಾದರೆ, ಜಾತ್ರೆಗೆ ಬಂದ ಬೀಗರು ಮಲಗಲು ಚಿಕ್ಕ ಚಿಕ್ಕ ಮನೆಗಳಲ್ಲಿ ಸ್ಥಳವಿಲ್ಲದ ಕಾರಣ ರಾತ್ರಿ ಕಳೆಯಲು ಸ್ಥಳಾವಕಾಶವಾಗಿತ್ತು. ಹೀಗೆ ನಾಟಕ ಆಡುವ, ನೋಡುವ ಹುಚ್ಚು ಹಚ್ಚಿಕೊಂಡ ಜನರಿಗೆ ಮನೋರಂಜನೆ ನೀಡಲು ಅನೇಕ ವೃತ್ತಿ ನಾಟಕ ಕಂಪನಿಗಳು ಹುಟ್ಟಿಕೊಂಡವು. ನಂತರ ಬೆಳ್ಳಿ ಪರದೆ ಜನರನ್ನು ಚಿತ್ರಮಂದಿರದ ಕಡೆ ಸೆಳೆಯಿತು. ಅನೇಕ ನಾಟಕ ಕಲಾವಿದರು ಸಹಾ ಚಿತ್ರರಂಗ ಪ್ರವೇಶ ಮಾಡಿ ತಮ್ಮ ಹೆಸರನ್ನು ಅಳಿಯದಂತೆ ಉಳಿಸಿರುವುದರ ಜೊತೆಗೆ ಚಿತ್ರೋದ್ಯಮವನ್ನು ಬೆಳೆಸಿದರು. ಇವರಲ್ಲಿ ಗುಬ್ಬಿ ಕಂಪನಿಯ ವೀರಣ್ಣನವರು, ಇವರ ಕಂಪನಿಯ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಡಾ.ರಾಜಕುಮಾರ್ ಇವರನ್ನು ಮರೆಯಲು ಸಾದ್ಯವೇ. ಎಲಿವಾಳ ಸಿದ್ದಯ್ಯನವರಿಗೆ ಅಂದಿನ ಕಾಲದಲ್ಲಿ ವೃತ್ತಿ ನಾಟಕದಲ್ಲಿ ದೊಡ್ಡ ಹೆಸರಿತ್ತು. ಅವರ ಬಗ್ಗೆ ಅಪಾರ ಅಭಿಮಾನವಿತ್ತು. ಅವರ ಅಭಿನಯ ನೋಡಲು ಜನಸಾಗರವೇ ಹರಿದು ಬರುತ್ತಿತ್ತು. ಅವರು ಕುಡಿತದ ಚಟಕ್ಕೆ ದಾಸರಾಗದೇ ಇದ್ದರೆ, ಈ ದೌರ್ಬಲ್ಯ ಬೀಳದೇ ಇದ್ದರೆ ಕನ್ನಡ ರಂಗಭೂಮಿಯಲ್ಲಿ ಮಾತ್ರವಲ್ಲ ಕನ್ನಡ ಚಲನ ಚಿತ್ರದಲ್ಲಿಸಹಾ ಡಾ. ರಾಜ್ ಕುಮಾರ್ ರಂತೆ ಬೆಳೆದು ದೊಡ್ಡ ಹೆಸರು ಮಾಡುತ್ತಿದ್ದರೇನೋ.
ಒಂದು ನಾಟಕ ಕಂಪನಿ ನಡೆಸುವುದೆಂದರೆ ಸುಲಭದ ಮಾತಲ್ಲ. ನಾಟಕ ಟೆಂಟ್ ಒಂದು ಊರಿನಿಂದ ಇನ್ನೊಂದು ಊರಿಗೆ ಸ್ಥಳಾಂತರಿಸಬೇಕೆಂದರೆ ಈಗಿನ ಕೂಲಿ ಕೆಲಸಗಾರರ ಲೆಕ್ಕದಲ್ಲಿ ಕನಿಷ್ಟ ಎರಡೂವರೆಯಿಂದ ಮೂರುಲಕ್ಷವಾಗುತ್ತದೆ. ನಾಟಕ ಚೆನ್ನಾಗಿ ಕಲೆಕ್ಷನ್ ಆದರೆ ಮಾಲೀಕ ಉಳಿಯುತ್ತಾನೆ. ಇಲ್ಲದೇ ಹೋದರೆ ಸಾಲಗಾರನಾಗುತ್ತಾನೆ. ಎಷ್ಟೋ ಸಣ್ಣ-ಪುಟ್ಟ ನಾಟಕ ಕಂಪನಿಗಳು ಜಾತ್ರೆಗಳಲ್ಲಿ ಗಳಿಸಬಹುದೆಂದು ಹಾಕಿದ ಟೆಂಟ್ ಪೈಪೋಟಿಯಲ್ಲಿ ಸೋತು, ಸಾಲ ನೀಡಲಾಗದೇ ಚೇರ್ ಗಳು, ಹಾಕಿದ ಟೆಂಟನ್ ತಗಡುಗಳನ್ನು ಬಿಟ್ಟುಹೋದ ನಿದರ್ಶನಗಳಿವೆ. ನಾಟಕ ರಂಗದಲ್ಲಿ ದೊಡ್ಡ ಹೆಸರು ಮಾಡಿದ್ದ ಕಂದಗಲ್ ಹನುಮಂತರಾಯರು ಈ ರೀತಿ ಹಾಕಿದ ನಾಟಕ ಟೆಂಟ್ನಲ್ಲಿ ಕಲೆಕ್ಷನ್ ಆಗದೇ ಮಾರವಾಡಿಗೆ ಮಾಡಿದ ಸಾಲ ತೀರಿಸಲಾಗದೇ ಜೈಲಿಗೆ ಹೋಗಿದ್ದರು. ಅಲ್ಲಿ ತಮ್ಮ ಬದುಕಿನ ಚಿತ್ರಣವನ್ನೇ ನೆನಸಿ “ಬಡತನದ ಭೂತ” ಎನ್ನುವ ನಾಟಕವನ್ನು ರಚಿಸಿ ತಮ್ಮ ತಂಡದವರಿಗೆ ಕಳಿಸುತ್ತಾರೆ. ಬಡತನದ ಭೂತ ಅದ್ಭುತವಾದ ಗಳಿಕೆ ಮಾಡುತ್ತದೆ. ಮಾರವಾಡಿಯ ಸಾಲ ಕಟ್ಟಿ ಕಂದಗಲ್ ಹನುಮಂತರಾಯರನ್ನು ಹೊರಗೆ ಕರೆತರುತ್ತಾರೆ. ನಲವಾಡಿ ಶ್ರೀಕಂಠ ಶಾಸ್ತ್ರಿಗಳು ತಮ್ಮ ಆತ್ಮೀಯರಾದ ಕಂದಗಲ್ ಹನುಮಂತರಾಯರಿಗೆ “ಅಸ್ತಮಾ ಖಾಯಿಲೆ ಉಲ್ಬಣವಾಗುತ್ತಿದೆ. ಚಿಕಿತ್ಸೆಗೆ ನೂರು ರೂಪಾಯಿ ಸಿಗುತ್ತಿಲ್ಲ. ಮುಂದಿನದು ದೇವರ ಚಿತ್ತ” ಎಂದು ಒಂದು ಪತ್ರವನ್ನು ಬರೆದಿರುತ್ತಾರೆ. ಅದೇ ಕೊನೆಯ ಪತ್ರ. ನಾಟಕ ಕಂಪನಿಗಳು ಗಳಿಕೆಯಲ್ಲಿ ಸೋತಾಗ ನಲವಡಿ ಶ್ರೀಕಂಠ ಶಾಸ್ತ್ರಿಗಳ ಹೇಮರೆಡ್ಡಿ ಮಲ್ಲಮ್ಮ ನಾಟಕವನ್ನು ಪ್ರದರ್ಶನ ಮಾಡಿದರೆ ಸಾಕು ಎಲ್ಲಿಲ್ಲದ ಗಳಿಕೆಯಾಗುತ್ತಿತ್ತು. ಆದರೆ ಅಂತಹ ನಾಟಕ ರಚಿಸಿದ ಕಲಾವಿದ ಸಂಕಷ್ಟದಲ್ಲೇ ಮಡಿಯುವಂತಾದದ್ದು ದುರಂತ. ಗೌಡ್ರ ಗದ್ದಲ, ಆಶಾ-ಲತಾ, ಕಲಿತ ಕಳ್ಳ ಮುಂತಾದ ನಾಟಕಗಳನ್ನು ಬರೆದ ಹಡಗಲಿ ತಾಲೂಕಿನ ಮಿರಕೊರನಹಳ್ಳಿಯ ಬಿ.ವಿ.ಈಶ ಸಹಾ ತಾವೇ ಮಾಡಿಕೊಂಡ ಸ್ವಯಂಕೃತ ಅಪರಾಧವಾದ ಕುಡಿತ ಚಟಕ್ಕೆ ಬಲಿಯಾಗಿದ್ದು ದುರಂತವೇ ಸರಿ. ಆರ್ಥಿಕ ಸಂಕಷ್ಟದಲ್ಲಿ ದೇವರ ಗುಡಿಯಲ್ಲಿನ ಗಂಟೆಯನ್ನು ಕದ್ದು, ಮಾರಿ ಜೀವನ ಸಾಗಿಸಿದ್ದ ತಮ್ಮ ಜೀವನದ ಕಥೆಯನ್ನೇ ಆದರಿಸಿ “ಕಲಿತ ಕಳ್ಳ” ಎನ್ನುವ ನಾಟಕವನ್ನು ರಚಿಸಿದ್ದರು. ಹೀಗೆ ನಾಟಕಕಾರರು, ರಂಗ ಕಲಾವಿದರು ತಮ್ಮ ಮನಸ್ಸಿನ ಕಹಿ ಘಟನೆಗಳನ್ನು, ಸಮಾಜದಲ್ಲಿ ಕಂಡ ಅನ್ಯಾಯಗಳನ್ನು ತಮ್ಮ ಕೃತಿಗಳಲ್ಲಿ ಬರೆದು ಅದನ್ನು ರಂಗ ತೆರೆಯ ಮೇಲೆ ಪ್ರದರ್ಶನ ಮಾಡಿ ಪ್ರೇಕ್ಷರನ್ನು ರಂಜಿಸಿದ್ದಾರೆ. ತಮ್ಮೊಳಗೆ ದು:ಖ ಮಡುಗಟ್ಟಿದ್ದರೂ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿ ಪ್ರೇಕ್ಷಕರ ನೋವು ಕ್ಷಣಕಾಲ ಮರೆಯಾಗಿ ನಗು ಮೊಗದೊಂದಿಗೆ ಮನೆಗೆ ತೆರಳುವಂತೆ ಹಾಸ್ಯ ಕಲಾವಿದರು ಮಾಡುತ್ತಾರೆ. ಈಗ ಜನರಿಗೆ 3 ತಾಸು ಕುಳಿತು ನೋಡುವ ವ್ಯವದಾನ ಉಳಿದಿಲ್ಲ. ಮಕ್ಕಳನ್ನು ಹೆಚ್ಚಿನ ವಿದ್ಯಾವಂತರನ್ನಾಗಿ ಮಾಡಿ ವಿವಿಧ ಉದ್ಯೋಗಸ್ತರನ್ನಾಗಿ ಮಾಡುತ್ತಿದ್ದು, ತಮ್ಮ ಕಲೆಯನ್ನೇ ತಮ್ಮ ಮಕ್ಕಳು ಮುಂದುವರಿಸಲು ಹೆಚ್ಣಿನ ಕಲಾವಿದರು ಇಷ್ಟಪಡದೇ ಇರುವುದರಿಂದ ರಂಗಭೂಮಿಯಲ್ಲಿ ಕಲಾವಿದರ ಕೊರತೆ ಇದೆ. ಸುಮಾರು 25 ವರ್ಷಗಳ ಹಿಂದೆ ರಾಜ್ಯದಲ್ಲಿ 50-60 ವೃತ್ತಿ ನಾಟಕ ಕಂಪನಿಗಳಿದ್ದು, ಈಗ ಅಂದಾಜು 30 ಕಂಪನಿಗಳು ಉಳಿದಿದ್ದು, ಚಲನ ಚಿತ್ರ, ಟಿ.ವಿ. ಧಾರವಾಹಿಗಳ ಅಬ್ಬರದ ನಡುವೆ ತಮ್ಮ ಬದುಕು ಕಟ್ಟಿಕೊಳ್ಳಲು ಕಂಪನಿಗಳು ಹೆಣಗಾಡುತ್ತಿವೆ.
ಹೀಗೆ ಪ್ರೇಕ್ಷರನ್ನೇ, ನಾಟಕ ಪ್ರೇಮಿಗಳನ್ನೇ ನಂಬಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದ ನಾಟಕ ಕಂಪನಿಗಳು ಕಳೆದ 3 ವರ್ಷದಿಂದ ಕರೋನೋ ಎನ್ನುವ ಮಹಾಮಾರಿಯಿಂದಾಗಿ, ಜಾತ್ರೆ- ಉತ್ಸವಗಳ ಸಮಯಯದಲ್ಲಿ ಹಾಕುತ್ತಿದ್ದ ಟೆಂಟ್ ಗಳು ಲಾಕ್ ಡೌನ್ ನಿಂದಾಗಿ ಬಂದಾದವು. ಕಲಾವಿದರು ತಮ್ಮ ಬದುಕು ಕಟ್ಟಿಕೊಳ್ಳಲು, ಕುಟುಂಬ ನಿರ್ವಹಿಸಲು ಸಂಕಷ್ಟವನ್ನೇ ಅನುಭವಿದರು. ಬೇರೆ ವೃತ್ತಿಬಾರದೇ, ಪ್ರದರ್ಶನ ಇಲ್ಲದೇ ಕಂಗಾಲಾಗಿದ್ದ ಕಲಾವಿದರಿಗೆ ಈಗ ಸ್ವಲ್ಪ ನಿರಾಳತನ ಕಂಡಿದೆ. ನಾಡಿನಲ್ಲಿ ಶ್ರೀ ಗುರು ಕೊಟ್ಟೂರೇಶ್ವರ ಜಾತ್ರೆಯು ಪ್ರಸಿದ್ಧವಾಗಿದ್ದು, ಕೊಟ್ಟೂರಿನ ಈ ರಥೋತ್ಸವದಲ್ಲಿ ಪ್ರಸಿದ್ಧ 2-3 ನಾಟಕ ಕಂಪನಿಗಳು ಪ್ರತಿವರ್ಷ ಟೆಂಟ್ ಹಾಕಿ 15 ದಿನದಿಂದ ತಿಂಗಳವರೆಗೆ ಇದ್ದು ಮಾಡಿಕೊಂಡು ಹೋಗುತ್ತವೆ.